ಮಾನ್, ತಾಮಸ್
1875-1955. ಜರ್ಮನ್ ಕಾದಂಬರಿಕಾರ, ಪತ್ರಿಕೋದ್ಯಮಿ, ಪ್ರಬಂಧಕಾರ, ನೊಬೆಲ್ ಪ್ರಶಸ್ತಿ ವಿಜೇತ (1929). ಗಯಟೆಯ ಲ್ಯುಬೆಕ್‍ನಲ್ಲಿ 1875 ಜೂನ್ 6ರಂದು ಹುಟ್ಟಿದ. ತಂದೆ ಶ್ರೀಮಂತ ವ್ಯಾಪಾರಿ. ತಂದೆ ಸತ್ತಾಗ ಇವನಿಗೆ ಕೇವಲ 15 ವರ್ಷ. ಅನಂತರ ಇವನ ತಾಯಿ ಮಕ್ಕಳೊಡನೆ ಮ್ಯೂನಿಚ್‍ಗೆ ಹೋಗಿ ನೆಲಸಿದಳು. ಅಲ್ಲಿ ಜೀವವಿಮಾ ಕಛೇರಿಯಲ್ಲಿ ಸ್ವಲ್ಪಕಾಲ ದುಡಿದ, ಇವನ ಮೊದಲ ಕತೆ ಜೆಫಾಲನ್ ಪ್ರಕಟವಾದದ್ದು ಆಗಲೇ. ಡೆರ್‍ಕ್ಲೈನೆ ಹೆರ್ ಫ್ರೀಡ್‍ಮಾನ್ ಮತ್ತು ಟ್ರೈಸ್ಟಾನ್ (1903) ಇವು ಇತನ ಕಥಾ ಸಂಕಲನಗಳು.

ಈತ ಇಟಲಿಯಲ್ಲಿದ್ದಾಗ ಬುಡನ್‍ಬ್ರೂಕ್ಸ್ (1901) ಎಂಬ ಕಾದಂಬರಿ ಬರೆದ. ಇದು ಈತನ ಮೊದಲ ಕಾದಂಬರಿ. ವರ್ತಕ ಕುಟುಂಬವೊಂದರ ಕತೆ ಇದರಲ್ಲಿದೆ. ಈ ಕುಟುಂಬ ನಾಲ್ಕು ತಲೆಮಾರುಗಳಲ್ಲಿ ಭೌತಿಕವಾಗಿ ಅವನತಿ ಹೊಂದಿದ್ದರೂ ಬೌದ್ಧಿಕವಾಗಿ ಪರಿಷ್ಕಾರಗೊಂಡ ಸಾಹಸದ ವರ್ಣನೆ ಇಲ್ಲಿದೆ. ಇದು ಇವನ ಕುಟುಂಬದ ಕತೆಯಂತೆಯೇ ಇದೆ. ಇಟಲಿಯಿಂದ ಮ್ಯೂನಿಚ್‍ಗೆ ಹಿಂತಿರುಗಿದ ಮೇಲೆ 1933 ರಿಂದ ಸಿಂಪ್ಲಿಸಿಸ್ಸಿಮಸ್ ಎಂಬ ಸಾಪ್ತಾಹಿಕದ ಸಂಪಾದಕ ಮಂಡಲಿಯ ಸಲಹೆಗಾರನಾಗಿದ್ದ. ಈ ಪತ್ರಿಕೆಯಲ್ಲಿ ಇವನ ಕೆಲವು ಕತೆಗಳು ಬೆಳಕು ಕಂಡವು. 1937 ರಿಂದ ಸ್ವಿಟ್ಜರ್‍ಲೆಂಡಿನಲ್ಲಿ ಮಾಸ್ ಅಂಡ್ ವೆರ್ಟ್ ಎಂಬ ಪತ್ರಿಕೆಯಲ್ಲಿ ಸಂಪಾದಕನಾಗಿ ಕೆಲಸಮಾಡಿದ. ಇವನ ಹಾಗೂ ಖಾನ್ ವಿಶ್ವವಿದ್ಯಾಲಯದ ಪ್ರಧಾನಾಧಿಕಾರಿ ನಡುವೆ ನಡೆದ ಪತ್ರೋತ್ತರಗಳು ಎನ್ ಬ್ರೀಫ್‍ವೆಷಲ್ (ಎನ್ ಎಕ್ಸ್‍ಛೇಂಜ್ ಆಫ್ ಲೆಟರ್ಸ್-1937) ಎಂಬ ಹೆಸರಿನಲ್ಲಿ ಪ್ರಕಟವಾದುವು. 1938ರಲ್ಲಿ ಇವನು ಅಮೆರಿಕೆಗೆ ಹೋಗಿ 1944ರಲ್ಲಿ ಅಲ್ಲಿಯ ಪೌರತ್ವ ಪಡೆದ.

ಡರ್ ಟೋಟ್ ಇನ್ ವೆನೆಡಿಕ್ (1912) ಕಾದಂಬರಿ ಬಾಲಕನೊಬ್ಬನ ಜೊತೆಯಲ್ಲಿ ತೀರ ಕೀಳಾಗಿ ವರ್ತಿಸಿದ ಸಾಹಿತಿಯೊಬ್ಬನ ನೈತಿಕ ಪತನವನ್ನು ಚಿತ್ರಿಸುತ್ತದೆ.

ಡಾಸ್ ವುಂಡರ್‍ಕಿಂಡ್ (1914) ಸಾಂಕೇತಿಕ ಕಾದಂಬರಿ. ಡೆರ್ ಜೌಬರ್ ಬೆರ್ಗ್ (ದ ಮ್ಯಾಜಿಕ್ ಮೌಂಟನ್-1924) ಕೃತಿಯಲ್ಲಿ ಕ್ಷಯರೋಗಿಯ ಮಾನಸಿಕ ತುಮುಲವನ್ನು ಚಿತ್ರಿಸಲಾಗಿದೆ. ಈ ಕೃತಿ ರಚಿಸಲು ಮಾನ್ 12 ವರ್ಷಗಳ ಕಾಲ ಶ್ರಮಿಸಿದ. ಯೋಸೆಫ್ ವೂಂಟ್ ಸೈನೆಬ್ರೂಡರ್ (1933-43) ಈತನ ಬೃಹತ್ ಕೃತಿ. ಇದು ನಾಲ್ಕು ಭಾಗಗಳಲ್ಲಿ ಪ್ರಕಟಗೊಂಡಿದೆ. ಬೈಬಲಿನಲ್ಲಿ ಬರುವ ಜೋಸೆಫ್‍ನ ಕತೆಯನ್ನು ಮನೋವೈಜ್ಞಾನಿಕ ಮತ್ತು ಪೌರಾಣಿಕ ದೃಷ್ಟಿಗಳಿಂದ ವಿಶ್ಲೇಷಿಸಲಾಗಿದೆ. ಡಾ.ಫೌಸ್ಟಸ್ (1947) ಯುದ್ಧ ಪೂರ್ವ ಮತ್ತು ಯುದ್ಧೋತ್ತರ ಜರ್ಮನಿಯ ಹಿನ್ನೆಲೆಯಲ್ಲಿ ಚಿತ್ರಿತವಾದ ಕೃತಿ, ಡಿ ಬಿಟ್ರೊಗೆನೆಯಲ್ಲಿ (ಬ್ಲಾಕ್‍ಸ್ವಾನ್-1953) ಪ್ರಕೃತಿ ಸಹಜ ಕಾಮನೆಗೆ ಒತ್ತುಕೊಟ್ಟು ಕಲ್ಪನಾಲೋಕದಲ್ಲಿ ವಿಹರಿಸಿ ಆಶ್ವರ್ಯಕರ ರೀತಿಯಲ್ಲಿ ಅಳಿಯುವ ಹೆಣ್ಣಿನ ದುರಂತ ಚಿತ್ರಣವಿದೆ. ಡೀ ಬೆಕೆಂಟ್‍ನಿಸೆ ಡೆಸ್ ಹೋಕ್ ಸ್ಟಾಪ್ಲರ್ಸ್ ಫೆಲಿಕ್ಸ್ ಕ್ರುಲ್ (1954) ಇವನ ಕೊನೆಯ ಮತ್ತು ಜರ್ಮನ್ ಸಾಹಿತ್ಯದ ಅತ್ಯುತ್ತಮ ಹಾಸ್ಯ ಕಾದಂಬರಿ. ಇದು ಮಧ್ಯಮವರ್ಗಕ್ಕೆ ಸೇರಿದ ವಂಚಕನೊಬ್ಬನ ಸಾಹಸಗಳನ್ನು ತಿಳಿಸುತ್ತದೆ.

ತಾಮಸ್‍ನ ಪ್ರಬಂಧಗಳು ರಾಜಕೀಯ, ಸಾಹಿತ್ಯ, ಸಂಗೀತ ಮತ್ತು ತತ್ತ್ವಜ್ಞಾನವನ್ನು ಕುರಿತವು. ಆರ್ಡರ್ ಆಫ್ ಟೂ ಡಿಕೇಡ್ಸ್ (1942), ಎಸ್ಸೇಸ್ ಆಫ್ ತ್ರೀ ಡಿಕೇಡ್ಸ್ (1947) ಮತ್ತು ಈತನ ಮರಣಾನಂತರ ಪ್ರಕಟಗೊಂಡ ಲಾಸ್ಟ್ ಎಸ್ಸೇಸ್ (1959) ಇವು ಈತನ ಪ್ರಬಂಧ ಸಂಕಲನಗಳು.

ಇವನ ಬರೆವಣಿಗೆಯಲ್ಲಿ ಕಲಾತ್ಮಕ ನಿರ್ಲಿಪ್ತತೆ ಮತ್ತು ಸಹಿಷ್ಣುತೆಯ ವಾತಾವರಣ ನಿರ್ಮಿಸುವ ಸಂಭಾವಿತ ವ್ಯಂಗ್ಯದ ಹೊಳಪಿದೆ. ಆ ಕಾಲದ ಸಾಂಪ್ರದಾಯಿಕ ಯಥಾರ್ಥ ನಿರೂಪಣಾ ಪದ್ಧತಿ ಮತ್ತು ಶೈಲಿ ಸಂವಿಧಾನಗಳ ಪ್ರಾಯೋಗಿಕತೆಯ ಸಮತೋಲನವನ್ನು ಈತ ಸಾಧಿಸಿದ. ಇವನು ಯೂರೊಪಿನ ಮಧ್ಯಮವರ್ಗದ ಮೌಲ್ಯಗಳು ಮತ್ತು ಮನೋಭಾವದ ಟೀಕಾಕಾರನಾಗಿದ್ದಂತೆಯೇ ಸಹಾನುಭೂತಿಯುಳ್ಳ ವಿಶ್ಲೇಷಕನಾಗಿದ್ದ. ಜೀವ ಮತ್ತು ಚೇತನಗಳ ನಡುವಿನ ದ್ವಂದ್ವ ಇವನ ಬರವಣಿಗೆಯ ಕೇಂದ್ರ ವಸ್ತು. ಇವನು ತಿಳಿದಂತೆ ಚೇತನವೆಂದರೆ ಬೌದ್ಧಿಕ ಪರಿಷ್ಕಾರ ಮತ್ತು ಸೃಜನ ಶೀಲತೆ, ಜೀವವೆಂದರೆ ಆಕೃತ್ರಿಮ ಮತ್ತು ಪ್ರಶ್ನಾತೀತ ಸತ್ತ್ವ. ಅನೇಕ ವೇಳೆ ಇವನು ಈ ದ್ವಂದ್ವವನ್ನು ಕಲಾವಿದನ ಹಾಗೂ ಮಧ್ಯಮ ವರ್ಗದ ಜನರ ಮನೋಭಾವಗಳ ಸಂಘರ್ಷದ ಮೂಲಕ ತೋರಿಸಲು ಪ್ರಯತ್ನಿಸಿದ್ದಾನೆ.

ತೀವ್ರ ಅನಾರೋಗ್ಯದಿಂದಾಗಿ 1955 ಆಗಸ್ಟ್ 12ರಂದು ಜೂರಿಚ್‍ನಲ್ಲಿ ನಿಧನನಾದ. ಈತನ ಸಹೋದರ ಮಾನ್, ಹೈನ್ರಿಕ್ (1871-1950) ಮತ್ತು ಮಗ ಮಾನ್ ಕ್ಲೌಸ್ (1906-1949) ಇಬ್ಬರೂ ಪ್ರಸಿದ್ಧ ಕಾದಂಬರಿಕಾರರು. ಕ್ಲೌಸ್ ತನ್ನ ತಂಗಿ ಎರಿಕ್ ಜೊತೆಗೂಡಿ ಎಸ್ಕೇಪ್ ಟು ಲೈಫ್ (1939), ದ ಅದರ್ ಜರ್ಮನಿ (1940) ಎಂಬ ಎರಡು ಕಾದಂಬರಿಗಳನ್ನು ಬರೆದ.												
(ವಿ.ಹೆಚ್.)

	`ಡೆವ್ ಇನ್ ವೆನಿಸ್ ಮಾನ್‍ನ ಮುಖ, ಕೃತಿಗಳಲ್ಲೊಂದು ವೆನಿಸಿಗೆ ಬಂದ ಹಿಗಸ್ಟಾನ್ ಆಷನ್ ಬಾಕ್ ಎನ್ನುವ ಸಾಹಿತಿ, ಒಬ್ಬ ಹುಡುಗನಿಂದ ಆಕರ್ಷಿತನಾಗುವುದೇ ಇದರ ಕಥಾವಸ್ತು ಕಲೆಯ ಸ್ವರೂಪ ಮತ್ತು ಕಲಾವಿದ ಸಮಾಜ, ಕಲಾವಿದ-ಸೌಂದರ್ಯ ಇವುಗಳ ಸಂಬಂಧ ಇವು ಈ ಕಾದಂಬರಿಯ ವಸ್ತು ಆಷನ್‍ಬಕ್ ಹುಡುಗನನ್ನು ಮೋಹಿಸಿ, ಅವನನ್ನು ಹಿಂಬಾಲಿಸುತ್ತಾ, ನಗರದಲ್ಲಿ ಕಾಲರ ರೋಗ ಬಂದ್ರೂ ಅಲ್ಲಿಯೇ ಉಳಿದು ಪ್ರಾಣವನ್ನೊಪ್ಪಿಸುತ್ತಾನೆ. ಆಷನ್‍ಬಕ್‍ಗೆ ಸಾಹಿತಿಗಿರಬೇಕಾದ ಸತ್ಯನಿಷ್ಠೆ ಇಲ್ಲ. ಖ್ಯಾತಿಗಳು ಸತ್ಯವನ್ನು ಬಲಕೊಟ್ಟಿದ್ದಾನೆ. ಕಾದಂಬರಿಯು ಅವನ ಅಂತಃ ಸತ್ವವು ಭ್ರಷ್ಠವಾಗುತ್ತ ಹೋಗುವುದನ್ನು ಚಿತ್ರಿಸುತ್ತದೆ. ಕೃತಿಯುದ್ದಕ್ಕು ಮನುಷ್ಯನಲ್ಲಿರುವ ಸಂತನ ಅಂಶ ಮತ್ತು ಪಿಶಾಚಿಯ ಅಂಶ ಒಟ್ಟಿಗೆ ಸಾಗಿ ಬರುತ್ತವೆ.

	ಮಾನ್‍ನ ಹೆಂಡತಿಗೆ ಕ್ಷಯ ರೋಗವಾದಾಗ ಸ್ವಲ್ಪ ಕಾಲ ಅವಳು ಕ್ಷಯ ರೋಗಗಳ ಆಸ್ಪತ್ರೆಯಲ್ಲಿದ್ದಳು; ಮಾನ್ ಅವಳೊಡನೆ ಹೋಗಿದ್ದ ಅಲ್ಲಿನ ಅನುಭವವೇ `ದ ಮ್ಯಾಜಿಕ್ ಮೌಂಟನ್‍ನ ಸಾಮಗ್ರಿ ಇಡೀ ಕ್ರಿಯೆ ಸ್ವಿಟ್ಜರ್‍ಲೆಂಡಿನ ಒಂದು ಕ್ಷಯ ರೋಗದ ಆಸ್ಪತ್ರೆಯಲ್ಲಿ ನಡೆಯುತ್ತದೆ. ಇಲ್ಲಿಗೆ ಹೊರ ಜಗತ್ತಿನಿಂದ ಬರುವವರೇ ವಿರಳ. ಹೀಗಾಗಿ ಇದೇ ಒಂದು ಜಗತ್ತಾಗುತ್ತದೆ. ಇಲ್ಲಿನ ರೋಗಿಗಳು ಯೂರೋಪಿನ ಬೇರೆ ಬೇರೆ ದೇಶಗಳಿಂದ ಬಂದವರು. ಈ ಆಸ್ಪತ್ರೆಯು ಒಂದು ರೀತಿಯಲಕ್ಲಿ ಯೂರೋಪಿನ ಪ್ರತಿನಿಧಿಯಾಗುತ್ತದೆ. ಹ್ಯಾನ್ಸ್ ಕಾಸ್ಟೋರ್ಸ್ ಎಂಬ ಸೌಮ್ಯ ಸ್ವಭಾವದ, ಆರೋಗ್ಯವಂತ ವರುಣನು ರೋಗಿಯಾದ ತನ್ನ ಚಿಕ್ಕಪ್ಪನ ಮಗನೊಂದಿಗೆ ಕೆಲವು ದಿನಗಳು ಇರಲು ಬರುತ್ತಾನೆ. ಅವನಿಗೂ ಕ್ಷಯದ ಸೋಂಕಾಗಿ ಏಳು ವರ್ಷಗಳ ಕಾಲ ಇಲ್ಲಿರುತ್ತಾನೆ. ಏಳು ವರ್ಷಗಳಲ್ಲಿ ಅವನ ಮಾನಸಿಕ ಬೆಳವಣಿಗೆಯನ್ನು ಕಾದಂಬರಿ ಗುರುತಿಸುತ್ತದೆ. ಕಾದಂಬರಿಯಲ್ಲಿ ಕುತೂಹಲಕರವಾದ ಮನೋವಿಶ್ಲೇಷಣೆ ಇದೆ.
											ಪರಿಷ್ಕರಣೆ
ಎಲ್.ಎಸ್.ಶೇಷಗಿರಿರಾವ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ